Posts

Showing posts from March, 2016

ಬಸ್ಸಿನ ಪಯಣದಿ....

ಹೇ ಹುಡುಗಿ ಬಸ್ಸಿನ ಪಯಣದಿ ನಿನ್ನ ಕೈ ಬೆರಳೆನ್ನ ಎದೆಗೆ ತಾಕಿ ನನ್ನ ಪಯಣದ ಗಮ್ಯವೆ ನನಗೆ ಮರೆತು ಹೋಗಿದೆ ನಿನ್ನ ಸಾಮೀಪ್ಯದ ಈ ಒಂದು ಕ್ಷಣ ಇಪ್ಪತ್ತು ವರ್ಷಗಳ ನನ್ನ ಗತವನ್ನೆಲ್ಲಾ ಮನದಿಂದ ಅಳಿಸಿ, ನಿನ್ನ ಮಾತ್ರವೇ ತುಂಬಿದೆ ಈ ಒಂದು ಅರೆ ಘಳಿಗೆ ಮರೆಯದ ಸುಂದರ ರಸ ಘಳಿಗೆ ಹೀಗೆ ಇದ್ದರೆ ಪ್ರತಿ ಘಳಿಗೆ ಸಾಕೆಂದು ಹೃದಯ ಕ್ಷಣಕ್ಷಣಕ್ಕೂ ಮಿಡಿಯುತಿದೆ ~ಪ್ರಕಾಶ್

ಸಾಕಾಗಿದೆ ಗೆಳತಿ ಈ ವಿರಹ..

 ಸಾಕಾಗಿದೆ ಗೆಳತಿ ಈ ವಿರಹ  ಬೇಕಾಗಿದೆ ತುರ್ತಾಗಿ ನಿನ್ನ ಸನಿಹ  ಮಾರುತಗಳಿಂದ ಚದುರಿ  ದಿಕ್ಕು ತಪ್ಪಿರುವ ಮೇಘಗಳಂತೆ  ನಿನ್ನ ನೆನಪುಗಳು ಮನದಲಿ  ನನ್ನ ಮನದಂಗಳದಲಿ  ಅತ್ತಿತ್ತ ಓಡಾಡುತ್ತಿವೆ  ಸೂರ್ಯನ ಹೊಂಗಿರಣಗಳಿಗೆ  ಕಾದಿರುವ ಮಲ್ಲಿಗೆಯ ಮೊಗ್ಗಿನಂತೆ  ಕಾಯುತಿವೆ ನನ್ನಯ ಕಂಗಳು  ಕಾಣಲು ಆ ಮುಂಗುರುಳು  ಮುದ್ದಿಸುತ್ತಿರುವ ನಿನ್ನ ಮೊಗವನು                                      ~ಪ್ರಕಾಶ್

ಓ ಮನವೆ...

ಓ ಮನವೆ ಕನಸು ಕಟ್ಟಿ ಮುನಿಸು ಸುಟ್ಟು ಸರ್ವ ಹಿತದ ಗುರಿಯ ನೆಟ್ಟು ಸಾಗು ನೀ ನುಗ್ಗು ನೀ ಮೆಟ್ಟಿ ಎಲ್ಲ ಅಡೆ ತಡೆಯ ಮುಟ್ಟಿ ಗುರಿಯ ಗರಿಯ ನಿಲ್ಲು ನೀ ಗೆಲ್ಲು ನೀ ಕನಸಿನ  ಕಟ್ಟ ಕಡೆಯ ಗುರಿಯ ತುಟ್ಟ ತುದಿಯ ಏರು ನೀ ಸೇರು ನೀ ~ಪ್ರಕಾಶ್

ಅವಳ ಆ ಕಂಗಳು...

 ಅವಳ ಆ ಕಂಗಳು  ಮೋಡಗಳ ಮರೆಯಿಂದ  ಇಣುಕುತಿಹ ರವಿಯ ಕಿರಣಗಳಂತೆ  ಹೊಳೆಯುತಿವೆ  ತುಂತುರು ಮಳೆ ಹನಿಗಳಿಂದ  ಪ್ರತಿಫಲಿಸಿದ ನೇಸರನ ಬೆಳಕಂತೆ  ಬೆಳಗುತಿವೆ  ಮಳೆ-ಬಿಸಿಲಿನ ಆಟದಿಂದ  ಹುಟ್ಟಿದ ಕಾಮನಬಿಲ್ಲಿನಂತೆ  ಸೊಗಸಾಗಿವೆ  ಬಣ್ಣಗಳ ಸಮರಸದಿಂದ  ಮೂಡಿದ ಕಲಾಕೃತಿಯಂತೆ  ಸೆಳೆಯುತಿವೆ  ~ಪ್ರಕಾಶ್

ಬಾ ಗೆಳತಿ...

 ಮಲ್ಲಿಗೆ ಮೊಗ್ಗು ಅರಳುವ ಹಾಗೆ  ಮೆಲ್ಲಗೆ ಬಾ ನಿನ್ನೊಲವ ಊರಿಗೆ  ನಿನ್ನ ಕನಸ ನನಸಿಗೆ  ತನ್ನ ಕನಸು ಮರೆತ ಮನದ ಗೂಡಿಗೆ  ನೀ ಇಡುವ ಪ್ರತಿ ಹೆಜ್ಜೆಗೆ  ಹೆಜ್ಜೆ ಗೆಜ್ಜೆಯ ನಾದದ ಮೋಡಿಗೆ  ಕಾದಿರುವ ಮುಗ್ಧ ಹೃದಯದ ಸೂರಿಗೆ...   ~ಪ್ರಕಾಶ್                              

ಗೆಳತಿ ನಿನ್ನಗಲಿಕೆ.....

         ನಲುಗಿ ಹೋಗಿರುವೆ      ನಿನ್ನ ನೆನಪುಗಳ ದಾಳಿಯಿಂದ      ಅಣುಸ್ಫೊಟವಾದ ಹಿರೋಷಿಮಾದಂತೆ          ನಡುಗುತ ಕುಳಿತಿರುವೆ      ನನ್ನೆದೆಯ ಶೋಕದ ಚಳಿಗೆ      ಮಳೆಗೆ ತತ್ತರಿಸಿದ ಚೆನ್ನೈನಂತೆ          ಎದುರಿಸಲಾಗದೆ ನಿಂತಿರುವೆ      ನೀ ದೂರಾದ ವಾರ್ತೆ ತಂದ ಗಾಳಿಗೆ      ಚಂಡಮಾರುತಕ್ಕೆ ಸಿಕ್ಕ ನಗರದಂತೆ         ಹೆದರಿ ಕುಗ್ಗಿರುವೆ     ನೀನಿಲ್ಲದ ಭವಿಷ್ಯದ ಕಲ್ಪನೆಯಿಂದ     ಉಗ್ರರ ದಾಳಿಗೊಳಗಾದ ಮುಂಬೈನಂತೆ.      ~ಪ್ರಕಾಶ್

ಅಮವಾಸ್ಯೆ..

ಮುಗಿಲೂರಿನ ತುಂಬ ಚುಕ್ಕಿ ದೀಪಗಳ ತುಂಬು ರಂಗೋಲಿ ಮಡಿದಿದ್ದ ಚಂದಿರನ ನೆನಪಿನಲಿ ಸಲ್ಲಿಸುತ ಶ್ರದ್ದಾಂಜಲಿ ಗೂಬೆಗಳು ಕೂಗುತಿವೆ, ಹಕ್ಕಿಗಳು ಮೌನ ಹೊದ್ದಿವೆ  ಶೋಕದಲಿ ಕಂಬನಿ ಮಿಡಿಯುತಿದೆ ತಂಗಾಳಿ ಶಶಿಯ ತವರೂರಾದ ವಸುಧೆಯಲಿ ಭೊರ್ಗರೆವ ಕಡಲು ಶಾಂತವಾಗಿ ಮಲಗಿದೆ ಬೇಸರದಲಿ ಮಲಗಿದೆ ಮಗುವೊಂದು ಮತ್ತೆ ಬರುವ ಚಂದ್ರಮ ಎಂಬ ಕನಸಲಿ ~ಪ್ರಕಾಶ್

ಎನ್ ಚೆಂದ ಅದಾಳೋ ಆಕಿ....!

ಏನ್ ಚೆಂದ ಅದಾಳೋ ಆಕಿ...! ಮುತ್ತಿನ ಮೂಗುತಿ ಹಾಕ್ಕೊಂಡು ಇಳಕಲ್ ಸೀರಿ ಉಟ್ಟ್ಕೊಂಡು ಮೈತುಂಬ ಬೆಳದಿಂಗಳ ತುಂಬ್ಕೊಂಡು ಬಂದಾಳ ಕನಸನ್ಯಾಗ ಚಂದ್ರನ ತುಂಡು ಹಸಿರು ಬಳೆಗಳ ಸಪ್ಪಳ ಮಾಡಿ ಬೆಳ್ಳಿ ಗೆಜ್ಜಿಲೇ ನಾದ ಹೊರಡಿಸ್ತಾಳ ಓರೆಗಣ್ಣೊಳಗ ಕಾಡೊಹಾಂಗ ನೋಡಿ ನೋಡೊ ನೋಟದಾಗ ಸಂದೇಶ ಕೊಡ್ತಾಳ ನಗುವಿನ ಒಡವಿ ಹಾಕ್ಕೊಂಡು ನಾಚಿಕೆಯ ಅರಿವೆ ಹೊದ್ಕೊಂಡು ಮಲ್ಲಿಗಿ ಮಾಲಿ ಮುಡ್ಕೊಂಡು ಹೋದ್ಳು ನನ್ನ ಮನಸು ಹೊಡ್ಕೊಂಡು.. ~ಪ್ರಕಾಶ್ ಮಾಯಣ್ಣವರ್ 

ಗೆಳತಿ

ಗೆಳತಿ ಮರಳ ಹಾಸಿನ ಸಮುದ್ರ ತಟದಲಿ ಹಕ್ಕಿಗಳ ಸರಿಗಮ ಹೆಚ್ಚಿತು ಕ್ಷಣದಲಿ ಪ್ರಕೃತಿಯ ಸಂಭ್ರಮ ಚೈತ್ರದ ತೆರದಲಿ ನಿನ್ನ ಹೆಜ್ಜೆ ಗೆಜ್ಜೆಯ ನಾದ ಕೇಳುತಲಿ ಉಕ್ಕಿ ಉಕ್ಕಿ ಬಂದಿತು ಕಡಲು ನಿನ್ನನು ಒಮ್ಮೆ ಸ್ಪರ್ಶಿಸಲು ಬಿಕ್ಕಿ ಬಿಕ್ಕಿ ಅಳುತಿದೆ ಮುಗಿಲು ನಿನ್ನ ಸನಿಹ ಅಸಾಧ್ಯ ಎನಲು ಸುಳಿದು ಸೂಸಿ ಬಂದಿತು ತಂಗಾಳಿ ನಿನ್ನ ಹೆಸರು ಉಸುರಿದ್ದು ಕೇಳಿ ಒಲವ ಗಿಳಿ ಬಂದಿತೆನ್ನ ಎದೆಯ ಸೀಳಿ ನಿನ್ನ ನಗುವಿನ ಸದ್ದು ಬಂದಿದ್ದು ಕೇಳಿ ~ಪ್ರಕಾಶ್

ಗೆಳತಿ....

ಗೆಳತಿ ಒಪ್ಪಿಕೋ ಒಮ್ಮೆ ಒಲವ ಗೂಡು ಹೃದಯ ದುಖಃದ ತಾಪಕೆ ಕರಗಿ ಹೋಗುವ ಮುನ್ನ ಅಪ್ಪಿಕೋ ಒಮ್ಮೆ ಒಲವ ಬಿಸಿ ನೆತ್ತರು ಜಿಗುಪ್ಸೆಯ ಶೀತಕೆ ಹೆಪ್ಪುಗಟ್ಟುವ ಮುನ್ನ -ಪ್ರಕಾಶ್

ಹೇ ಹುಡುಗಿ......

ಹೇ ಹುಡುಗಿ ನಾನೊಂದು ಕವಿತೆ ಬರೆಯಲು ಕುಳಿತೆ ಪದಗಳೆ ಸಿಗಲಿಲ್ಲ ಸಾಲುಗಳು ಹೊಳೆಯಲಿಲ್ಲ ನೆನಪಾಯ್ತು ಆಗ ಚೆಲುವಾದ ನಿನ್ನ ಮೊಗ ಪದಗಳು ಕೂಡಿದವು ವರ್ಣಿಸಲು ನಿನ್ನ ನಯನ ಸಾಲುಗಳು ಹುಟ್ಟಿದವು ಹೊಗಳಲು ನಿನ್ನ ವದನ ನಿನ್ನಂದ ಚೆಂದಗಳೆ ಹಾಡಾಗಿ ಮೂಡಿವೆ ನಿನ್ನ ನೆನಪುಗಳೆ ಕವಿತೆಯಾಗಿ ನಿಂದಿವೆ. ~ಪ್ರಕಾಶ್

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ

     ಇಂದಿನ ಯುವ ಚಿಂತನೆಗಳಲ್ಲಿ ಆಸ್ತಿಕತೆ-ನಾಸ್ತಿಕತೆಯ ಬಗೆಗಿನ ದ್ವಂದ್ವ ಇದ್ದೇ ಇರುತ್ತದೆ. ಅಧ್ಯಯನ, ಅನುಭವಗಳು ಈ ದ್ವಂದ್ವವ ಮೀರಲು ಸಹಕಾರಿ. ನಾನು ನನ್ನ ಪಿಯುಸಿಯ ದಿನಗಳಲ್ಲಿ ವೈಚಾರಿಕತೆ ಎಂದರೆ ಆಸ್ತಿಕತೆಯ ವಿರುದ್ಧವಿರುವುದು, ಸಂಪ್ರದಾಯಗಳ ಮೀರಿ ನಡೆಯುವುದು ಎಂದು ಬಲವಾಗಿ ನಂಬಿದ್ದೆ. ಆದರೆ ನನ್ನ ಈ ನಂಬಿಕೆಯನ್ನು ಸಡಿಲಗೊಳಿಸಿದ್ದು ಕುವೆಂಪು ಅವರ ವಿಚಾರಧಾರೆಗಳು.      ಆಗ ಪಿಯುಸಿಯ ಕನ್ನಡ ಪಠ್ಯದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ಬರೆದ 'ಅಣ್ಣನ ನೆನಪು' ಕೃತಿಯ ಒಂದು ಭಾಗ ಇತ್ತು. ಅದರಲ್ಲಿ ತೇಜಸ್ವಿ ಅವರು ಬರೆಯುವಂತೆ, ಕುವೆಂಪು ತಮ್ಮ ಜೀವನದಲ್ ಲಿ ಯಾವ ದೇವಸ್ಥಾನಗಳಿಗೂ ಕಾಲಿಡಲಿಲ್ಲ. ಆದರೆ ನಿತ್ಯವೂ ಮನೆಯಲ್ಲಿ ತಪ್ಪದೇ ಪೂಜೆ ಮಾಡುತ್ತಿದ್ದರು. ರಾಮಕೃಷ್ಣ ಪರಮಹಂಸರ ಶಿಷ್ಯರಾದ ಸ್ವಾಮಿ ಶಿವಾನಂದರಿಂದ ದೀಕ್ಷೆ ತೆಗೆದುಕೊಂಡಿದ್ದರು. ಈ ವಿಚಾರಗಳು ನನ್ನ ಚಿಂತನೆಯನ್ನು ಬದಲಿಸಿತು. ಕುವೆಂಪು ಅವರು ವೈಚಾರಿಕ ಆಸ್ತಿಕರಾಗಿದ್ದರು ಎಂದರೆ ತಪ್ಪಾಗಲಾರದೇನೊ.      ಕುವೆಂಪು ಅವರು ಮೌಢ್ಯಗಳನ್ನು ವಿರೋಧಿಸಿತ್ತಿದ್ದರೆ ಹೊರತು ನಂಬಿಕೆಗಳನ್ನಲ್ಲ. ಮೊನ್ನೆ ನನ್ನ ಮಿತ್ರನೊಬ್ಬ ನನಗೆ ಕೇಳಿದ "ನೀನು ಕುವೆಂಪು ಆಸ್ತಿಕರು ಅಂತೀಯ ಆದ್ರೆ ಅವರೆ 'ನೂರು ದೇವರುಗಳ ನೂಕಾಚೆ ದೂರ' ಅಂತ ಬರೆದಿದ್ದಾರಲ್ಲ" ಅಂತ. ಅದಕ್ಕೆ ನಾನಂದೆ "ಹೌದು ಅವರು ಹಾಗೆ ಬರೆದಿದ್ದಾರೆ, ಆದರೆ ಆ ಕವನದ ಮ