Posts

Showing posts from August, 2016

ಹೇಗೆ ಬರೆಯಲಿ ಕವನ....?

Image
ಹೇಳು ಹುಡುಗಿ ಹೇಗೆ ಬರೆಯಲಿ ಕವನ? ಭಾವನೆಗಳ ಬತ್ತಿಸಿದೆ, ಕನಸುಗಳ ತುಳಿದೆ. ಮನಸನು ಕೊರೆದೆ, ಎದೆಯನು ಇರಿದೆ. ಹೇಗೆ ಬರೆಯಲಿ ಕವನ? ಎದೆಗೂಡಿನ ಒಲವ ಹಕ್ಕಿ, ವಿರಹದಿ ನೊಂದು ಬೆಂದಿದೆ. ಸಂತಸ ಹಂಚುವ ರವಿಗೆ, ವಿಷಾದದ ಮೋಡ ಕವಿದಿದೆ. ಹೇಗೆ ಬರೆಯಲಿ ಕವನ? ನಲ್ಮೆಯ ಪದಗಳಲಿ, ಒಲವಿನ ರುಚಿಯಿಲ್ಲ. ಮಾತುಗಳು ಸೋತಿವೆ, ಬರೀ ಮೌನ ತುಂಬಿದೆ. ಹೇಗೆ ಬರೆಯಲಿ ಕವನ? ~ಪ್ರಕಾಶ್ ಮಾಯಣ್ಣವರ್

ಹೇ ಹುಡುಗಿ...

Image
ಹೇ ಹುಡುಗಿ... ಮರಳಿ ಮರಳಿ ಕಾಡುತಿದೆ ನೀ ಬಿಟ್ಟು ಹೋದ ನೆನಪು ಕಣ್ಣಲಿ ಅಲುಗದೆ ಕುಳಿತಿದೆ ನಿನದೆ ವಯ್ಯಾರ ಒನಪು ತೋರುತಿದೆ ನನ್ನ ಹೃದಯ ನನ್ನ ಮೇಲೆಯೆ ಮುನಿಸು ಮರೆತಿದೆ ಮನವು ಖುಷಿಯ ಕರಗುತಿದೆ ಒಲವ ಕನಸು ಬಳಿ ಬಂದು ಒಮ್ಮೆ ತೋರೇ ಈ ಮನಕೆ ಒಲವ ಸವಿಯ ಮತ್ತೊಮ್ಮೆ ಪರಿಚಯಿಸು ಬಾರೇ ಈ ಹೃದಯಕೆ ಖುಷಿಯ ರವಿಯ. ~ಪ್ರಕಾಶ್ ಮಾಯಣ್ಣವರ್

ಪೊರೆಯೋ ಶ್ರೀಕೃಷ್ಣ..

Image
ವಾಸುದೇವ ನಂದಗೋಪಾಲ ಗೋವು ಪಾಲಿಸಿದವ ನೀ ಗೋಪಾಲ ಕೊಳಲಧಾರಿ ಮುರಳಿಯೆ ಪೊರೆಯೊ ಎಮ್ಮನು ವೇಣುಗೋಪಾಲ ಗೋ ರಕ್ಷಕನೆ ಗೋವಿಂದ ಮುಕ್ತಿ ಕರುಣಿಸೋ ಮುಕುಂದ ಇಂದ್ರಿಯ ನಿಗ್ರಹಿ ಹೃಷೀಕೇಶ ನೀ ಪಸರಿಸು ಎಲ್ಲೆಡೆ ಆನಂದ ಅಸುರ ವೈರಿಯೇ ಅಸುರಾರಿ ಸುದರ್ಶನ ಧರಿಸಿದ ಶ್ರೀ ಚಕ್ರಧಾರಿ ಮುರ ವೈರಿ ನೀ ಮುರಾರಿ ಗೀತಾಚಾರ್ಯ ಜಗನ್ನಾಟಕ ಸೂತ್ರದಾರಿ ದ್ವಾರಕೆ ನಿರ್ಮಿಸಿ ಜನರ ಪೊರೆದವ ನೀ ದ್ವಾರಕಾಧೀಶ, ದ್ವಾರಕಾನಾಥ ಬೆಣ್ಣೆಯ ಕದ್ದು ತಿಂದ ನವನೀತ ನೀ ಜಗದ್ ರಕ್ಷಕ ಜಗನ್ನಾಥ ಗೋಕುಲವಾಸಿ ದೇವಕಿ ನಂದನ ಗೋಪಿಕಾಪ್ರೀಯ ಗೋಪಿಕಾನಂದನ ಮಧುವೆಂಬ ರಕ್ಕಸನ ಸೊಕ್ಕಡಗಿಸಿದ ಮಧುಸೂದನ ಕಾರ್ಮುಗಿಲ ಬಣ್ಣದವ ನೀ ಶ್ಯಾಮಸುಂದರ ಘನಶ್ಯಾಮ ಆದರ್ಶ ಪುರುಷ ನೀ ಪುರುಷೋತ್ತಮ ಭಕ್ತರ ಹೃದಯವೇ ನಿನ್ನಯ ಧಾಮ ~ಪ್ರಕಾಶ್ ಮಾಯಣ್ಣವರ್

ಹೂವೊಂದು ಸೆಳೆಯುತಿದೆ...

Image
ಹುಬ್ಬಳ್ಳಿ ಎಂಬ ಹೂ ಬಳ್ಳಿಯಲೊಂದು ಹೂ ಸೆಳೆಯುತಿದೆ ನನ್ನನು ಮಲ್ಲಿಗೆಯ ಅಂದದಿ ಸಂಪಿಗೆಯ ಚಂದದಿ ಮೆಲ್ಲಗೆ ಬಂಧಿಸುತಿದೆ ನನ್ನನು ಸೇವಂತಿಯ ತಂಪಿಂದ ಜಾಜಿಯ ಕಂಪಿಂದ ಮೋಹದಿ ಕಟ್ಟುತಿದೆ ನನ್ನನು ಮೆಚ್ಚುವ ಬಣ್ಣದಿ ಚುಚ್ಚುವ ಮುಳ್ಳನು ಮರೆಸಿ ಬಳಿ ಎಳೆಯುತಿದೆ ನನ್ನನು ಸೊಕ್ಕಿನ ಹುಡುಗಿಯ ಬೆಕ್ಕಿನ ನಡಿಗೆಯ ಒನಪು ಮಾಯದಿಂದ ಆವರಿಸುತಿದೆ ನನ್ನನು ~ಪ್ರಕಾಶ್ ಮಾಯಣ್ಣವರ್

ಇಳಿಸಂಜೆಯ ಹೊತ್ತಲ್ಲಿ...

Image
ಇಳಿಸಂಜೆಯ ಹೊತ್ತಲ್ಲಿ... ನಲ್ಲೆಯ ಕಿರುಬೆರಳಿಗೆ  ತನ್ನ ಕಿರುಬೆರಳನು ಸೇರಿಸಿ ನಿಧಾನದಿ ನಲ್ಲ ನಡೆದಿದ್ದ ಈ ಪ್ರೇಮಿಗಳ ಪ್ರೇಮದ ಮೆರವಣಿಗೆ ಕಂಡು ಮುಗಿಲು ಆನಂದ ಬಾಷ್ಪ ಸುರಿಸಿತ್ತು ಮುಗಿಲ ಸುರಿಸಿದ ಹನಿಗಳು ತಾಕಿ ನಡುಗಿದ ನಲ್ಲೆ ನಲ್ಲನ ಬಿಗಿದಪ್ಪಿದಳು ಪ್ರೇಮೊನ್ಮಾದದ ಕ್ಷಣವನು  ಕಣ್ತುಂಬಿಕೊಳ್ಳುವ ಆಸೆಯಿಂದ ಮಿಂಚೊಂದ ಹರಿಸಿತು ಮುಗಿಲು ಮೇಘಗಳ ಮರೆಯಿಂದ ನೇಸರನು ಇಣುಕಿದ ಈ ಅದ್ಬುತವ ಮನದುಂಬಿ ಆಸ್ವಾದಿಸಲು ಹಕ್ಕಿಗಳು ಕಲರವದಲ್ಲಿ ಮರಗಳು ಹೂವನು ಚೆಲ್ಲಿ ತಮಗಾದ ಸಂತಸವ ತೋರಿದವು ~ಪ್ರಕಾಶ್ ಮಾಯಣ್ಣವರ್

ಬೇಡ ಗೆಳತಿ ನೀ ಹತ್ತಿರ ಬರಬೇಡ...

ಬೇಡ ಗೆಳತಿ ನೀ ಹತ್ತಿರ ಬರಬೇಡ ನೀ ಬಳಿ ಬಂದಾಗ ಹೃದಯ ಬಡಿಯದು ನಿನ್ನುಸಿರು ತಾಕಿದಾಗ ಉಸಿರಾಟ ನಿಲ್ಲುವುದು ನಿನ್ನ ಸನಿಹ ಜಗವ ಮರೆಸುವುದು ನಿನ್ನ ವಿನಹ ಬೇರೇನೂ ಕಾಣಿಸದು ನಿನ್ನ ಸ್ಪರ್ಶ ನನ್ನ ನಿಸ್ತೇಜಗೊಳಿಸುವುದು ನಿನ್ನ ಮಾತು ನನ್ನ ಮೂಕನನ್ನಾಗಿಸುವುದು ಬೇಡ ಹುಡುಗಿ ದಯಮಾಡಿ ಬಳಿ ಬರಬೇಡ ಬಡಪಾಯಿ ಹುಡುಗನ ಒಲವ ಸಿಹಿಯಿಂದ ಕೊಲ್ಲಬೇಡ -ಪ್ರಕಾಶ್ ಮಾಯಣ್ಣವರ್

ನಲ್ಲೆ ಈ ಹುಣ್ಣಿಮೆ ರಾತ್ರಿಯಲಿ..

ನಲ್ಲೆ ಈ ಹುಣ್ಣಿಮೆ ರಾತ್ರಿಯಲಿ.. ಹುಸಿ ಮುನಿಸ ತೋರಿ ನಿನ್ನ ಬಿಟ್ಟು ನಾ ತುಸು ದೂರ ನಿಂತಿರುವುದ ಕಂಡು ಚಂದಿರ ಒಳಗೊಳಗೆ ಹಿಗ್ಗಿ ನಿನ್ನ ಸುತ್ತ ಬೆಳದಿಂಗಳು ಹರಡಿ ಆಕರ್ಷಿಸಲೆತ್ನಿಸಿದ ಹೊಟ್ಟೆಕಿಚ್ಚಿನಿಂದ ಮೇಘಗಳು ಓಡಿ ಬಂದು ಚಂದ್ರನ ಮರೆಯಾಗಿಸಿ ಮಳೆ ಹನಿಗಳ ಸುರಿದವು ಮೇಘಗಳ ನಡುವೆಯೆ ನಿನ್ನ ಸ್ಪರ್ಶಕಾಗಿ ನಡೆದ ಮಾತಿನ ಸಮರವು ಗುಡುಗಾಗಿ ಕೇಳುತಿದೆ ~ಪ್ರಕಾಶ್ ಮಾಯಣ್ಣವರ್