ಇಂದಿನ ಯುವ ಚಿಂತನೆಗಳಲ್ಲಿ ಆಸ್ತಿಕತೆ-ನಾಸ್ತಿಕತೆಯ ಬಗೆಗಿನ ದ್ವಂದ್ವ ಇದ್ದೇ ಇರುತ್ತದೆ. ಅಧ್ಯಯನ, ಅನುಭವಗಳು ಈ ದ್ವಂದ್ವವ ಮೀರಲು ಸಹಕಾರಿ. ನಾನು ನನ್ನ ಪಿಯುಸಿಯ ದಿನಗಳಲ್ಲಿ ವೈಚಾರಿಕತೆ ಎಂದರೆ ಆಸ್ತಿಕತೆಯ ವಿರುದ್ಧವಿರುವುದು, ಸಂಪ್ರದಾಯಗಳ ಮೀರಿ ನಡೆಯುವುದು ಎಂದು ಬಲವಾಗಿ ನಂಬಿದ್ದೆ. ಆದರೆ ನನ್ನ ಈ ನಂಬಿಕೆಯನ್ನು ಸಡಿಲಗೊಳಿಸಿದ್ದು ಕುವೆಂಪು ಅವರ ವಿಚಾರಧಾರೆಗಳು. ಆಗ ಪಿಯುಸಿಯ ಕನ್ನಡ ಪಠ್ಯದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ಬರೆದ 'ಅಣ್ಣನ ನೆನಪು' ಕೃತಿಯ ಒಂದು ಭಾಗ ಇತ್ತು. ಅದರಲ್ಲಿ ತೇಜಸ್ವಿ ಅವರು ಬರೆಯುವಂತೆ, ಕುವೆಂಪು ತಮ್ಮ ಜೀವನದಲ್ ಲಿ ಯಾವ ದೇವಸ್ಥಾನಗಳಿಗೂ ಕಾಲಿಡಲಿಲ್ಲ. ಆದರೆ ನಿತ್ಯವೂ ಮನೆಯಲ್ಲಿ ತಪ್ಪದೇ ಪೂಜೆ ಮಾಡುತ್ತಿದ್ದರು. ರಾಮಕೃಷ್ಣ ಪರಮಹಂಸರ ಶಿಷ್ಯರಾದ ಸ್ವಾಮಿ ಶಿವಾನಂದರಿಂದ ದೀಕ್ಷೆ ತೆಗೆದುಕೊಂಡಿದ್ದರು. ಈ ವಿಚಾರಗಳು ನನ್ನ ಚಿಂತನೆಯನ್ನು ಬದಲಿಸಿತು. ಕುವೆಂಪು ಅವರು ವೈಚಾರಿಕ ಆಸ್ತಿಕರಾಗಿದ್ದರು ಎಂದರೆ ತಪ್ಪಾಗಲಾರದೇನೊ. ಕುವೆಂಪು ಅವರು ಮೌಢ್ಯಗಳನ್ನು ವಿರೋಧಿಸಿತ್ತಿದ್ದರೆ ಹೊರತು ನಂಬಿಕೆಗಳನ್ನಲ್ಲ. ಮೊನ್ನೆ ನನ್ನ ಮಿತ್ರನೊಬ್ಬ ನನಗೆ ಕೇಳಿದ "ನೀನು ಕುವೆಂಪು ಆಸ್ತಿಕರು ಅಂತೀಯ ಆದ್ರೆ ಅವರೆ 'ನೂರು ದೇವರುಗಳ ನೂಕಾಚೆ ದೂರ' ಅಂತ ಬರೆದಿದ್ದಾರಲ್ಲ" ಅಂತ. ಅದಕ್ಕೆ ನಾನಂದೆ "ಹೌದು ಅವರು ಹಾಗೆ ಬರೆದಿದ್ದಾರೆ, ...