ಶರೀಫರು ಬರೆದ ಪ್ರಾಕೃತ ಶಿವಪರಾಧ ಸ್ತೋತ್ರ

ಎಲ್ಲರಿಗೂ ನಮಸ್ಕಾರ! ನಾವು ಶರೀಫರ ಹಲವು ತತ್ವಪದಗಳನ್ನ ಸಿ ಅಶ್ವತ್ಥ್, ರಘು ದೀಕ್ಷಿತ್‌ರ ಸಂಗೀತದಲ್ಲಿ ಕೇಳಿ ಆನಂದಿಸಿದ್ದೇವೆ. ಆ ಸಾಲುಗಳಲ್ಲಿ ಮೈಮರೆತಿದ್ದೇವೆ. ಅರ್ಥ ಹುಡುಕಲು ಹೋಗಿ ಕೆಲವೊಮ್ಮೆ ಸೋತಿದ್ದೇವೆ, ಕೆಲವೊಮ್ಮೆ ಅಚ್ಚರಿಗೊಂಡಿದ್ದೇವೆ. ಆದರೆ ಬಹುತೇಕ ಜನರಿಗೆ ತಿಳಿಯದ ಸಂಗತಿ ಏನೇಂದರೆ. ಶರೀಫರು ಕೇವಲ ತತ್ವಪದಗಳನ್ನಷ್ಟೇ ರಚಿಸಲಿಲ್ಲ, ಇತರ ಸಾಹಿತ್ಯ ಪ್ರಕಾರದಲ್ಲೂ ಸಾಹಿತ್ಯ ರಚಿಸಿದ್ದಾರೆ. ಆ ಸಾಹಿತ್ಯ ಬಹುತೇಕ ಅಜ್ಞಾತವಾಗಿ ಉಳಿದಿದೆ. ಹೀಗೆ ಅವರ ಸಾಹಿತ್ಯದ ಬಗ್ಗೆ ಚಿಂತನೆ ನಡೆಸುವಾಗ ನೆನಪಾಗಿದ್ದು ಶಂಕರಾಚಾರ್ಯರ "ಶಿವಾಪರಾಧ" ಸ್ತೋತ್ರ" ನಾಳೆ 'ವೈಶಾಖಮಾಸ ಶುಕ್ಲಪಕ್ಷದ ಪಂಚಮಿ' ಅಂದರೆ 'ಶಂಕರರ ಜಯಂತಿ'. ಅವರು ರಚಿಸಿದ ಈ 'ಶಿವಾಪರಾಧ ಸ್ತೋತ್ರ'ವನ್ನು ನಮ್ಮ ಶರೀಫರು ಕನ್ನಡಿಕರೀಸಿದ್ದಾರೆ. ಅದೂ ಷಟ್ಪದಿಯ ರೂಪದಲ್ಲಿ. ಈ ಕಾವ್ಯ ಅದೇಕೆ ಸಾಹಿತ್ಯ ಪ್ರೀಯರಲ್ಲಿ ಹೆಚ್ಚು ಚರ್ಚೆಗೆ ಒಳಗಾಗಲಿಲ್ಲವೋ ಗೊತ್ತಿಲ್ಲ. ಈಗ ಅದನ್ನು ಸಂಗ್ರಹಿಸಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಏನಾದರೂ ತಪ್ಪುಗಳಿದ್ದರೆ ತಿಳಿದವರು ತಿಳಿಸಿ, ತಿದ್ದಿಕೊಳ್ಳುವೆ. ಶರೀಫರ ಆ ಕಾವ್ಯ ಕೆಳಗಿದೆ, ಓದಿ, ಅಭಿಪ್ರಾಯ ತಿಳಿಸಿ. ಧನ್ಯವಾದ


ಜಯತು ಗಣಪತಿ ಜ್ಞಾನ ದಿನಮಣಿ |
ಜಯತು ಸರಸ್ವತಿ ವಾಗ್ವಿಲಾಸಿನಿ |
ಜಯತು ಸದ್ಗುರು ಶ್ರುತಿ ಶಿರೋಮಣಿ ಕರುಣವಾರಿಧಿಯೇ ||
ಜಯತು ಕವಿವರ ವ್ಯಾಸ ಮುನಿಪತಿ |
ಜಯತು ವಾಲ್ಮೀಕಿ ಋಷಿ ಕುಲಾಗ್ರಣಿ |
ಜಯತು ಶಂಕರ ಭಾರತೀ ಗುರು ಪಾದಕೆರಗುವೆನು ||   (೧)

ಶಂಕರನೆ ಅವತರಿಸಿ ಧರಣಿಗೆ |
ಶಂಕರಾಚಾರ್ಯಾಗಿ ಬಂದನು |
ಪಂಕವನು ತೊಳೆದಲ್ಲಿ ಮನಸಿನ ಬಿಂಕವನು ಬಿಡಿಸಿ ||
ಕಿಂಕರರ ಪಾವನವ ಮಾಡುತ |
ಶಂಕೆಯಿಲ್ಲದ ಪದದೊಳಿಟ್ಟನು |
ಡೊಂಕು ಹಾದಿಯ ಬಿಡಿಸಿ ಕಲಿಯುಗದಲ್ಲಿ ಗುರುವಾಗಿ ||   (೨)

ಉಣ್ಣದೂಟವನುಣಿಸಿದನು ಗುರು |
ತನ್ನ ಶಿಷ್ಯರ ಗುಣವ ನೋಡದೆ |
ಮನ್ನಣೆಯ ಕೊಟ್ಟವರ ನೀ ಭವಜಲಧಿದಾಂಟಿಸಿದೆ ||
ಇನ್ನು ಗುರುವಿಗೆ ಸರಿಯ ಗಾಣೆನು |
ಬೆನ್ನು ಬಿದ್ದಂತವರ ರಕ್ಷಿಪ |
ಉನ್ನತೋನ್ನತ ಮಹಿಮೇ ಪಾಮರ ನುಡಿಯಲೆನ್ನಳವೆ ||   (೩)

ತಾನು ಶಂಕರ ಭಾರತಿ ಗುರುಗಳ |
ನಾನ ಬಗೆಯನುತಾಪ ಲಕ್ಷಣ |
ಮಾನ್ವ ಜನ್ಮಕೆ ಬಂದುದೆಲ್ಲವ ಭೋಗಿಸಿದ ಪರಿಯಾ ||
ತಾನು ಬಾಲ್ಯಾವಸ್ಥೆ ಮೊದಲಾ- |
ದ್ದೇನು ವ್ಯಥೆಯಾಗುವುದು ತನುವಿಗೆ |
ಸ್ವಾನುಭವದಿ ನುಡಿಯುತಿಹನು ಪರೋಪಕಾರಾರ್ಥ ||   (೪)

ಮನುಜರಾದವರೆಲ್ಲ ಕೇಳ್ವುದು |
ನೆನಪಿನಲಿ ಅಪರಾದ ಸ್ತೋತ್ರವ- |
ನನುದಿನದಿ ಮಾಡುವುದು ನಿತ್ಯಾನಿತ್ಯ ವಿವರವನು ||
ತನುತ್ರಯಕೆ ಸಾಕ್ಷಾತ್ ದೇವನ |
ತನುವಿನಲಿ ಕಾಣುವುದೆ ಸಾರ್ಥಕ |
ಎನಗೆ ಮತಿಯಿದ್ದಷ್ಟು ಪ್ರಾಕೃತ ಭಾಷೆಯಲಿ ನುಡಿವೆ ||   (೫)

ಮೊದಲು ಮಾಡಿದ ಕರ್ಮದಿಂದಲಿ |
ಯೊದಗಿ ಬಂದೆನು ತಾಯಿಯುದರಕೆ |
ಪುದಿದ ಮಲಮೂತ್ರದಲಿ ನೊಂದೆನು ಜಾಠರಾಗ್ನಿಯಲಿ ||
ಒದರಲಿಕೆ ಶಕ್ತಿಲ್ಲ ದುಃಖದ |
ಸದನದೊಳು ಮುಳುಗಿದೆನು ಶಿವ ಶಿವ |
ಇದಕೆ ಎನ್ನಯ ತಪ್ಪು ನೋಡದೆ ಕ್ಷಮಿಸು ಮಹಾದೇವ ||   (೬)

ಬಾಲ್ಯತನದಲಿ ದುಃಖ ಬಹಳಾ- |
ಕಾಲದಲಿ ತನು ಎಳೆಯದಿರೆ ಮೊಲೆ- |
ವಾಲು ಕುಡಿಯಲು ಶಕ್ತಿ ನಾಸ್ತಿಯು ಇಂದ್ರಿಯಂಗಳಿಗೆ ||
ಮೇಲೆ ರೋಗದ ಹೇಸಿಕೆಯು ಕ- |
ಣ್ಣಾಲೆ ನೊಣಗಳು ಕಡಿಮೆ ರುಧನದಿ |
ನೀಲ ಕಂಠನ ಸ್ಮರಣೆ ತಪ್ಪಿದೆ ಕ್ಷಮಿಸು ಮಹಾದೇವ ||    (೭)

ತನುವು ಪ್ರಾಯದ ಪಂಚ ವಿಷಯದ |
ಮೊನೆಯ ಬಾಣವು ತಾಗಲಾಕ್ಷಣ |
ನೆನಪು ಹೋದುದು ಮಾನಗರ್ವದ ಗಿರಿಯ ಸಡರಿದೆನು ||
ಮನಸಿನಲಿ ವಿವೇಕ ವಿಲ್ಲದೆ |
ಧನವು ಮಕ್ಕಳು ಮಡದಿಯರ ಸವಿ- |
ಯೆನಗೆ ಹತ್ತಲು ಮರೆತ ತಪ್ಪನು ಕ್ಷಮಿಸು ಮಹಾದೇವ ||  (೮)

ಒದಗಿ ಮುಪ್ಪದು ಬರಲು ಕಾಮತಿ |
ಕದಲುವುವು ಬಲು ಇಂದ್ರಿಯಂಗಳು |
ಚೆದರುವದು ಮನ ಭ್ರಾಂತಿ ಹೋಹುದು ವ್ಯಾಧಿ ಶಮನಿಸಲು ||
ಉದರದಲಿ ಬರಿ ಸುಳ್ಳು ಮೋಹವು |
ತುದಿಗೆ ದೂರ್ಜಟಿ ಧ್ಯಾನಕೊದಗದೆ |
ಇದಕೆ ಎನ್ನಯ ತಪ್ಪು ನೋಡದೆ ಕ್ಷಮಿಸು ಮಹಾದೇವಾ ||  (೯)

ಎನನರಿಯೆನು ಸ್ಮಾರ್ಥ ಕರ್ಮವ |
ಹೀನನಾದೆನು ಕುಲದ ನೀತಿಗೆ |
ತಾನೆ ಘಟಿಸುವ ಪ್ರತ್ಯವಾಯದ ಸ್ಮರಣೆ ಎನಗಿಲ್ಲ ||
ಜ್ಞಾನ ತತ್ವ ವಿಚಾರ ಬ್ರಹ್ಮದ |
ಖೂನ ಹಾದಿಯ ಶ್ರವಣ ಮನನದ |
ಧ್ಯಾನ ಶೂನ್ಯನ ತಪ್ಪು ಸರ್ವವು ಕ್ಷಮಿಸು ಮಹಾದೇವಾ ||    (೧೦)

ಉದಯ ಕಾಲದಿ ಸ್ನಾನ ಸಂಧ್ಯಾ- |
ವಿಧಿಯನೆಲ್ಲವ ಮುಗಿಸಿ ಭಾವದಿ |
ನದಿಯ ಉದಕದಿ ಮಾಡಲಿಲ್ಲವು ಶಿವಗೆ ಮಜ್ಜನವಾ ||
ಮುದದಿ ಪೂಜಿಸಿ ಬಿಲ್ವಪತ್ರದಿ |
ಒದಗಿದಮಲ ಸುಗಂಧ ಪುಷ್ಪವ |
ಇದನು ಏರಿಸದಿರ್ದ ತಪ್ಪನು ಕ್ಷಮಿಸು ಮಹಾದೇವಾ ||   (೧೧)

ತಂದು ಮಧು ಘೃತ ಪಯವ ಶತ ಘಟ |
ಇಂದುಧರನಿಗೆ ಎರೆಯಲಿಲ್ಲವೋ |
ಚಂದನದ ಮೊದಲಾದ ಲೇಪನ ಕನಕ ಭೂಷಣದಿ ||
ಇಂದು ಪೂಜಿಸಿ ಅನ್ನ ಚತುರ್ವಿಧ- |
ದಿಂದಲರ್ಪಿಸಿ ಧೂಪ ಕರ್ಪೂರ- |
ದಿಂದ ಬೆಳಗದಿಹ ತಪ್ಪನು ಕ್ಷಮಿಸು ಮಹಾದೇವಾ ||   (೧೨)

ಚಿತ್ತದಲಿ ಶಿವ ಧ್ಯಾನ ಮಾಡೆನು |
ಮತ್ತೆ ನೀಡೆನು ಧನ ದ್ವಿಜರಿಗೆ |
ಹೊತ್ತಿದಗ್ನಿಗೆ ಹವಿಯನರ್ಪಿಸಿ ಬೀಜ ಮಂತ್ರದಲಿ ||
ಮತ್ತೆ ಗಂಗಾ ವಾಸದಲ್ಲಿರೆ |
ಉತ್ತಮದ ವ್ರತ ರುದ್ರ ಜಪವನು |
ನಿತ್ಯದಲ್ಲಿ ಸಾಧಿಸದ ತಪ್ಪನು ಕ್ಷಮಿಸು ಮಹಾದೇವಾ ||   (೧೩)

ಕುಳಿತು ಸ್ವಸ್ಥಾಸನದಿ ತನ್ನೊಳು |
ಸುಳಿವ ಗಾಳಿಯ ಸೂಕ್ಷ್ಮ ಮಾರ್ಗದಿ |
ಹೊಳೆದು ಈಡಾಪಿಂಗಳನು ಸುಷುಮ್ನ ಮಾರ್ಗದಲಿ ||
ಹೊಳೆವ ಪ್ರಣವ ಜ್ಯೋತಿರೂಪದ |
ಒಳಗೆ ಬ್ರಹ್ಮಾನಂದದದಲಿ ಮನ |
ಮುಳುಗಿಸದಿಹವಪರಾಧ ಎನ್ನದು ಕ್ಷಮಿಸು ಮಹಾದೇವಾ ||   (೧೪)

ಸಂಗವಿರಹಿತನಾಗಿ ಗುಣಗಳ |
ಪಿಂಗಿ ಮೋಹದ ಕಳೆಯ ಕತ್ತಲೆ |
ಕಂಗಳಿಂದಲಿ ನಾಸಿಕಾಗ್ರವ ನೋಡಿ ವಾಸನೆಯಾ ||
ನುಂಗಿ ದ್ವೈತವನ ನನ್ಮದಿಂದಲಿ |
ಅಂಗದೊಳಗಿನ ಮಲಿನ ಕಳೆಯೆನು |
ಮಂಗಳಾತ್ಮನ ಸ್ಮರಣೆ ತಪ್ಪಿದೆ ಕ್ಷಮಿಸು ಮಹಾದೇವಾ ||   (೧೫)

ಶಿರಸದಲಿ ಚಂದ್ರಮನ ಸ್ಮರರಿಪು |
ಪರಮ ಪಾವನ ಗಂಗೆ ಜಡೆಯಲಿ |
ಉರಗ ಭೂಷಣ ಕಟಕ ಕಿವಿಯಲಿ ನೇತ್ರದಲಿ ಅಗ್ನಿ ||
ಧರಿಸಿಹನು ಕರಿಚರ್ಮದಂಬರ |
ನಿರುಪಮನೆ ತ್ರೈಲೋಕ್ಯ ಶೋಭಿಪ |
ಸ್ಮರಿಸುವೆನು ಮೋಕ್ಷಾರ್ಥಗೋಸುಗ ಕರ್ಮ ಭಯದಿಂದ ||   (೧೬)

ತನಗೆ ಧನವದು ಇದ್ದರೇನೈ |
ತನಗೆ ಹಯ ಕರಿಯಿದ್ದರೇನವು |
ತನಗೆ ರಾಜ್ಯವು ಪುತ್ರ ಮಿತ್ರ ಕಳತ್ರರಿರಲೇನು ||
ತನಗೆ ದನಕರು ಇದ್ದರೇನವು |
ಕ್ಷಣವು ಸ್ಥಿರವಲ್ಲೆಂದು ಜರಿಯುತ |
ಮನದೊಳಗೆ ಗುರುವಾಕ್ಯದಿಂದಲಿ ಭಜಿಸುವೆನು ಶಿವನಾ ||   (೧೭)

ದಿನ ದಿನವಾಯುಷ್ಯ ಕ್ಷೀಣವು |
ತನಗೆ ಪ್ರಾಯವು ಹೋಗುವದು ನಿಜ |
ತನುವನಾಕ್ಷಣ ಕಾಲ ಭಕ್ಷೀಪ ಲಕ್ಷ್ಮೀ ಸ್ಥಿರವಲ್ಲ ||
ಇನಿತು ನೀರ ತರಂಗ ಪರಿಯಲಿ |
ಯೆನಗೆ ತೋರಿತು ಮಿಂಚಿನಂದದಿ |
ನಿನಗೆ ಶರಣನು ಹೊಕ್ಕು ಬಂದೆನು ಜೀವ ಭ್ರಮೆ ಬಿಡಿಸು ||   (೧೮)

ಕರಚರಣ ಕಿವಿ ವಾಕ್ಯು ಜಿಹ್ವೆಯ |
ಹರಿವ ನಯನವು ಮತ್ತೆ ಮನಸಿನ |
ಪರಿ ಪರಿಯ ಅಪರಾಧ ವಿಹಿತಾ ವಿಹಿತವೆಲ್ಲವನು ||
ತ್ವರಿತದಿಂದಲಿ ಕ್ಷಮಿಸು ಸರ್ವವ |
ಹರನೆ ಜಯ ಜಯ ಕರುಣಸಾಗರ |
ನಿರುಪಮನೆ ನಿಜಲಿಂಗ ದೇವರ ದೇವ ಮಹಾದೇವಾ ||   (೧೯)

ಇಂತ ಶಂಕರ ಭಾರತಿ ಗುರುವಿನ |
ಅಂತರಂಗದ ತಾಪ ಲಕ್ಷಣ |
ಎಂತು ಹೇಳಲಿ ಬೇಕು ಜಗದೋದ್ಧಾರಗೋಸುಗವಾ ||
ಇಂತಿದೆಲ್ಲವ ತೋರಿದನು ಗುರು |
ಭ್ರಾಂತಿ ತೊರೆದನು ಬ್ರಹ್ಮಾಭಾವದಿ |
ಚಿಂತೆಯಿಲ್ಲದ ಮನೆಯ ಹೊಗಸಿದ ಮೂಢ ಪಾಮರನಾ ||   (೨೦

ಮನಸುವಗಡಿಸದನಕ ವಿಷಯದ |
ಮನವು ಉನ್ಮನವಾಗಬಲ್ಲುದೆ |
ಮನವು ಉನ್ಮನವಾಗದನಕಾ ಘನವು ದೊರಕುವದೇ ||
ಘನವು ದೊರಕದೆ ಶಾಂತಿ ಬಾರದು |
ಜನನ ಮರಣವು ಹಿಂಗಾಲಾರವು |
ತನುವು ಜಡವಿದು ಹೊತ್ತು ಬಂದುದರಿಂದ ಫಲವೇನು ||   (೨೧)

ಜರೆದು ಮನಸಿನ  ಪಂಚ ವಿಷಯದ |
ಹರಿದು ಗುರುವಿನ ಪಾದ ಕಮಲಕೆ |
ಬೆರೆದು ಹೋಗುವೆನೆಂದು ಯೋಚಿಸಿ ಬರಲು ಸನ್ನಿಧಿಗೆ ||
ಕರೆದು ತನ್ನಯ ಮುಂದೆ ಎನ್ನಯ |
ಶಿರದಲಿಟ್ಟನು ಅಭಯ ಹಸ್ತವ- |
ವರೆದನಾಗಳೆ ತತ್ವಮಸಿ ಮಹಾವಾಕ್ಯದುಪದೇಶಾ ||   (೨೨)

ಕಡಿದು ಹೋಯಿತು ಮನದ ತಾಪವು |
ಒಡೆಯ ಗುರುವಿನ ವಾಕ್ಯದಿಂದಲಿ |
ಜಡಿದು ಹೋದೆನು ಪಾದ ಕಮಲಕೆ ಏರಕದಂದದಲಿ ||
ಬಿಡದು ಗುರುವಿನ ಮೋಹವೆಂದಿಗೂ |
ಸಡಗರವ ನಾನೆಷ್ಟು ಹೇಳಲಿ |
ಮೃಡನೆ ಬಲ್ಲನು ಸುಖದ ಬಗೆಯನು ಅಂತರಂಗದಲಿ ||   (೨೩)

ಪರುಷ ಕಬ್ಬಿಣ ಸೋಂಕಿದಾಗಳೆ |
ತ್ವರಿತದಲಿ ಹೇಮಾಗಿ ನಿಲ್ವದು |
ಸ್ಪರ್ಷ್ಯವಾಗಲು ಗುರು ಕೃಪಾಕರ ಜೀವ ಬ್ರಹ್ಮಾದ ||
ನಿರಸವಾಗದು ಎಂದಿಗಾ ಸುಖ |
ಬೆರಸಿದನು ಗುರು ತನ್ನ ಪದದಲಿ |
ಹರುಷವಿಡಿಯಲು ಗಗನವದು ಪರಬ್ರಹ್ಮಮಯವಾಯ್ತು ||   (೨೪)

ಒಂದು ಶ್ಲೋಕಕೆ ಒಂದು ಪದವನು |
ತಂದೆ ಗುರು ಗೋವಿಂದನಾಜ್ಞದಿ |
ಕಂದ ಪೇಳಿದ ಜ್ಞಾನ ಭೋದಾ ಸ್ತೋತ್ರವಪರಾಧ ||
ಕುಂದು ಹೆಚ್ಚನು ಏನು ನೋಡದೆ |
ಮಂದಮತಿ ಹೇಳಿಹನು ಜ್ಞಾನೀ- |
ವೃಂದ ಕೇಳ್ವುಮ ಸಾಧು ಸಂತರು ಪರಮಕರುಣದಲಿ ||   (೨೫)

***ಶ್ರೀ ಶಿಶುನಾಳ ಶರೀಫ ಶಿವಯೋಗಿ ವಿರಚಿತ ಪ್ರಾಕೃತ ಶಿವಪರಾಧ ಸ್ತೋತ್ರವಿದು***

Comments

Popular posts from this blog

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ