ಭೈರಪ್ಪನವರ ಕಾದಂಬರಿ ಸಾರ್ಥ.



ನಾವು ಯಾಕೆ ಇತಿಹಾಸವನ್ನು ಓದಬೇಕು? ಇತಿಹಾಸವನ್ನು ಏಕೆ ಕೆದಕಬೇಕು? ಎಂಬ ಪ್ರಶ್ನೆ ನಮ್ಮೆಲ್ಲರಲ್ಲಿ ಒಂದು ಸಲವಾದರೂ ಮೂಡಿರುತ್ತದೆ‌. ನಾ ಕಂಡುಕೊಂಡಂತೆ, ಗತಕಾಲದಲ್ಲಾದ ತಪ್ಪುಗಳಿಂದ ಪಾಠ ಕಲಿತು, ಆ ತಪ್ಪುಗಳು ಮರುಕಳಿಸದಂತೆ ಎಚ್ವರವಹಿಸುವ ಜ್ಞಾನ ಸಂಪಾದನೆ, ಹಿಂದೆ ನಡೆದ ತರಹದ ಘಟನೆಗಳು ನಮ್ಮ ಮುಂದಿನ ಬದುಕಿನಲ್ಲೂ ಸಂಭವಿಸಿದಾಗ ನಾವು ಯಾವ ರೀತಿಯ ನಿರ್ಧಾರ ತೆಗೆದುಕೊಂಡರೆ ಉತ್ತಮ, ಯಾವ ರೀತಿ ವರ್ತಿಸಿದರೆ ಉತ್ತಮ ಎಂಬ ಅರಿವಿನ ಗಳಿಕೆ, ಇತಿಹಾಸದ ಅಧ್ಯಯನದಿಂದ ಸಾಧ್ಯ. ಈ ಕಾರಣದಿಂದ ಐತಿಹಾಸಿಕ ಕಾದಂಬರಿಗಳಲ್ಲಿ ಸ್ವಲ್ಪ ಆಸಕ್ತಿ ನನಗೆ. ತರಾಸು ಅವರ ದುರ್ಗಾಸ್ತಮಾನ, ಶಿಲ್ಪಶ್ರೀ, ಭೈರಪ್ಪನವರ ಆವರಣ, ಪರ್ವ ಮುಂತಾದ ಪುಸ್ತಕಗಳನ್ನು  ಓದಿದಾಗ ಮತ್ತಷ್ಟು ಈ ರೀತಿಯ ಐತಿಹಾಸಿಕ ಕಾದಂಬರಿಗಳನ್ನೋದಬೇಕೆಂಬ ತುಡಿತ ಹೆಚ್ಚಾಯಿತು. ಈ ಹಾದಿಯಲ್ಲಿ ಇಂದು ನಾ ಓದಿದ ಕಾದಂಬರಿ ಭೈರಪ್ಪನವರು ಬರೆದ "ಸಾರ್ಥ".

"ಸಾರ್ಥ" ಅಂದರೆ ನಮ್ಮ ಭರತಖಂಡದಲ್ಲಿ ಸುಮಾರು ಸಾವಿರ ವರ್ಷಗಳ ಹಿಂದೆ ನಡೆಯುತ್ತಿದ್ದ ವಾಣಿಜ್ಯ ವಹಿವಾಟಿನ ಪಯಣಕ್ಕೆ ಇದ್ದ ಹೆಸರು. ಈ ಕಾದಂಬರಿಯ ಕಥೆ ಸುಮಾರು ಕ್ರಿ. ಶ. ಎಂಟನೆ ಶತಮಾನದಲ್ಲಿ ನಡೆಯಿತೆಂದು ಊಹಿಸಿಕೊಂಡು ಬರೆದಿದ್ದು. ಇದರಲ್ಲಿ ಐತಿಹಾಸಿಕ ಕಥಾ ವಿವರಣೆ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಭಾರತೀಯ ಜೀವನ ದರ್ಶನಗಳ ವಿಚಾರ ಮಥನಗಳಿವೆ. ಬಹುಶಃ ಭೈರಪ್ಪನವರಲ್ಲದೆ ಬೇರೆಯವರು ಈ ತತ್ವದರ್ಶನದ ವಿಚಾರಗಳನ್ನು ಕಾದಂಬರಿಯಲ್ಲಿ ನಿಡುವ ಸಾಹಸ ಮಾಡಲಾರರು ಅನಿಸುತ್ತದೆ. ಭೈರಪ್ಪನವರು ತತ್ವಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿರುವ ಕಾರಣದಿಂದ ಈ ಕೃತಿಯಲ್ಲಿ ಎಂಟನೆ ಶತಮಾನದ ಭಾರತದಲ್ಲಿ ನಡೆದ ಮತಗಳ ತಾತ್ವಿಕ ತಿಕ್ಕಾಟವನ್ನು ಇಷ್ಟು ಸುಂದರವಾಗಿ ವಿವರಿಸಲು ಸಾಧ್ಯವಾಗಿದೆ ಎನಿಸುತ್ತದೆ. 

ಶಂಕರಾಚಾರ್ಯ ಮತ್ತು ಮಂಡನಮಿಶ್ರರ ಚರ್ಚೆ, ನಾಲಂದಾ ವಿಶ್ವವಿದ್ಯಾಲಯದಲ್ಲಿನ ಶಿಕ್ಷಣ ವ್ಯವಸ್ಥೆ, ವೈದಿಕ ಮತ್ತು ಬೌದ್ಧ ಮತಗಳ ತಾತ್ವಿಕ ಸಂಘರ್ಷ, ಆ ಕಾಲದ ವಾಣಿಜ್ಯ ಮತ್ತು ರಾಜಕೀಯ ಪರಿಸ್ಥಿತಿಗಳು ಎಲ್ಲವನ್ನೂ ಈ ಕೃತಿಯಲ್ಲಿ ಲೇಖಕರು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲ ಓದಿಗೆ ಈ ಕೃತಿ ನನ್ನರಿವಿಗೆ ಪೂರ್ತಿ ದಕ್ಕಲಿಲ್ಲ ಎನಿಸಿತು. ಇವರ "ಪರ್ವ"ವನ್ನು ಮೊದಲ ಬಾರಿಗೆ  ಓದಿದಾಗಲೂ ಇದೇ ಅನುಭವವಾಗಿತ್ತು. ಈ ಕಾರಣದಿಂದ ಆದಷ್ಟು ಬೇಗ ಈ ಪುಸ್ತಕವನ್ನು ಮತ್ತೊಮ್ಮೆ ಓದುವ ಬಯಕೆಯಿದೆ
~ಪ್ರಕಾಶ್ ಮಾಯಣ್ಣವರ್

Comments

Popular posts from this blog

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ

ಶರೀಫರು ಬರೆದ ಪ್ರಾಕೃತ ಶಿವಪರಾಧ ಸ್ತೋತ್ರ

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ