ಹಸಿವು ಹೆಚ್ಚಿಸಿದ 'ಏಳು ರೊಟ್ಟಿಗಳು'

 
   'ಏಳು ರೊಟ್ಟಿಗಳು' ಎಂಬ ಕಿರು ಕಾದಂಬರಿಯನ್ನು ನಿನ್ನೆ ಓದಿದೆ. ಗಣೇಶಯ್ಯನವರ ಈ ಪುಸ್ತಕ ಓದಬೇಕೆಂದು ಹುಬ್ಬಳ್ಳಿಯ ಸಪ್ನದಲ್ಲಿ ಹಾಗೂ ಕೆಲ ಕಡೆ ಹುಡುಕಾಡಿ ಕೊನೆಗೆ "ಕನ್ನಡ ಕಾದಂಬರಿಗಳ ಕೂಟ" ಎಂಬ ಗುಂಪಿನ ಸಹಾಯದಿಂದ ಈ ಪುಸ್ತಕ ಓದಲು ದೊರೆಯಿತು. ಯಾರಿಗಾದರೂ ಇದನ್ನೋದಿ ಮುಗಿಸುವ ಹೊತ್ತಿಗೆ ಹೈದರಾಬಾದಿನ ನಿಜಾಮರ ಕೋಟೆ,ಅರಮನೆಗಳನ್ನೊಮ್ಮೆ ನೋಡಬೇಕೆಂಬ ತುಡಿತ ಹುಟ್ಟುತ್ತದೆ. ಅಂತಹ ಆಸಕ್ತಿ ಹುಟ್ಟಿಸುವ ಕಾದಂಬರಿ ಇದು. ಕೆಲವು ಕಾಲ್ಪನಿಕ ಪಾತ್ರ, ಸನ್ನಿವೇಶಗಳನ್ನು ಸೃಷ್ಟಿಸಿ ಬಹುತೇಕ ನೈಜ, ಐತಿಹಾಸಿಕ ಆಧಾರಗಳ ಮೇಲೆ ರೋಚಕವಾಗಿ ಕಥೆ ಹೆಣೆದಿದ್ದಾರೆ. 

     ಹೈದರಾಬಾದ್ ನಿಜಾಮ ಮಹಾಯುದ್ಧದ ಸಮಯದಲ್ಲಿ, ಬ್ರಿಟಿಷರಿಗೆ ಸಾಲ ಕೊಟ್ಟಿದ್ದನೆಂದರೆ ಅವನ ಸಿರಿವಂತಿಕೆಯ ಕಲ್ಪನೆ ನಮಗಾಗಬಹುದು. ಸ್ವಾತಂತ್ರ್ಯಾನಂತರ ಹೈದರಾಭಾದ್ ವಶಪಡಿಸಿಕೊಂಡಾಗ, ನಿಜಾಮ ತನ್ನ ಅಪಾರ ಸಿರಿಯನ್ನು ಎಲ್ಲಿಗೆ ಸಾಗಿಸಲು ಯತ್ನಿಸಿದ, ಎಲ್ಲಿ ಮುಚ್ಚಿಟ್ಟ, ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರಿಗೂ ಇದಕ್ಕೂ ಇರುವ ಸಂಬಂಧವೇನು? ನಿಜಾಮನ ನಂಬಿಕೆ, ಜಾಯಮಾನಗಳೇನು? ಮುಂತಾದ ಹಲ ವಿಚಾರಗಳನ್ನು ಈ ಕೃತಿಯಲ್ಲಿ ಲೇಖಕರು ಸವಿವರವಾಗಿ ವಿವರಿಸಿದ್ದಾರೆ.

     ಈ ಕೃತಿಯ ಹೊರತರಲು ಗಣೇಶಯ್ಯನವರು ಪಟ್ಟ ಶ್ರಮ, ಅವರ ಸಂಶೋಧನಾ ಪ್ರವೃತ್ತಿ, ಅಧ್ಯಯನಶೀಲ ವ್ಯಕ್ತಿತ್ವಕ್ಕೆ ಎಷ್ಟು ವಂದಿಸಿದರೂ ಕಡಿಮೆ. ಮೂಲತಃ ಕೃಷಿ ವಿಜ್ಞಾನಿಯಾದ ಅವರು, ನಿವೃತ್ತಿ ನಂತರ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು, ಅದರಲ್ಲೂ ಐತಿಹಾಸಿಕ ಸಂಗತಿಗಳನ್ನು ರೋಚಕ ಪತ್ತೆದಾರಿ ಕಥೆಗಳಾಗಿ ಬರೆಯುತ್ತಾರೆಂದರೆ ಅವರ ಮೇಧಾವಿತನ ಎಂತಹುದ್ದಿರಬಹುದು ಯೋಚಿಸಿ. 'ನೇಹಲ ಕತೆ'ಗಾಗಿ ಸಂಶೋಧನೆ ನಡೆಸುತ್ತದ್ದಾಗ ಹುಟ್ಟಿದ ಆಸಕ್ತಿ ಅವರನ್ನು ಈ ಕೃತಿ ರಚಿಸಲು ಪ್ರೇರೆಪಿಸಿತಂತೆ. ಅವರ ಇತರ ಕೃತಿಗಳನ್ನು ಓದಲು ಮನ ತುಡಿಯುತ್ತಿದೆ.
~ಪ್ರಕಾಶ್

Comments

Popular posts from this blog

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ

ಶರೀಫರು ಬರೆದ ಪ್ರಾಕೃತ ಶಿವಪರಾಧ ಸ್ತೋತ್ರ

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ