ಭೈರಪ್ಪನವರ ವಂಶವೃಕ್ಷ
ಭೈರಪ್ಪನವರ 'ವಂಶವೃಕ್ಷ'ವನ್ನು ಓದಬೇಕೆಂಬ ಬಹುದಿನಗಳ ಆಶಯ ಇಂದಿಗೆ ತೀರಿತು. ಮೊದಲ ಕೆಲ ಪುಟಗಳಲ್ಲಿಯೇ ನಮ್ಮನ್ನಾವರಿಸಿ ಬಿಡುವ ರೀತಿ ಕಥೆ ತೆರೆದುಕೊಂಡಿದೆ. ನಮ್ಮ ಸುತ್ತಲೂ ಕಥೆ ಘಟಿಸುತ್ತಿರುವಂತೆ, ಮನೋಜ್ಞವಾಗಿ ಭೈರಪ್ಪನವರು ಚಿತ್ರಿಸಿದ್ದಾರೆ.
ಶ್ರೋತ್ರಿಯವರ ಪಾತ್ರವೇ ಕೃತಿಯಲ್ಲಿ ಪ್ರಮುಖ. ಶ್ರೋತ್ರಿಯವರ ಮಗನಾದ ನಂಜುಂಡ ಅಕಾಲಿಕ ಸಾವಿಗಿಡಾಗುವುದರೊಂದಿಗೆ ಕತೆ ಶುರುವಾಗುತ್ತದೆ. ಚಿಕ್ಕ ವಯಸ್ಸಿನ ಸೊಸೆ ಕ್ಯಾತ್ಯಾಯಿನಿ, ಒಂದು ವರ್ಷದ ಮೊಮ್ಮಗ ಚೀನಿ, ಹೆಂಡತಿ ಭಾಗೀರಥಮ್ಮ, ಮನೆಕೆಲಸದ ಲಕ್ಷ್ಮಿ, ಪ್ರೊಫೆಸರ್ ಆದ ಡಾ.ಸದಾಶಿವರಾಯರು, ಸದಾಶಿವರಾಯರ ತಮ್ಮ ರಾಜಾರಾಯ,ಹೆಂಡತಿ ನಾಗಲಕ್ಷ್ಮಿ ಅವರ ಶಿಷ್ಯೆ ಮತ್ತು ಎರಡನೆ ಹೆಂಡತಿಯಾಗಿ ಬರುವ ಕರುಣಾರತ್ನೆ, ಪ್ರತಿ ಪಾತ್ರಗಳು ನಮ್ಮನ್ನು ಕಾಡುತ್ತವೆ.
ಪ್ರತಿಯೊಂದು ಸನ್ನಿವೇಶದಲ್ಲೂ ನಮ್ಮನ್ನೂ ಯೋಚನೆಗೆ ತಳ್ಳುವಂತಹ ಅಂಶಗಳಿವೆ. ಪಾತ್ರಗಳ ತೊಳಲಾಟ ನಮ್ಮದೇ ಎನ್ನುವ ರೀತಿ ನಮ್ಮನ್ನಾವರಿಸುತ್ತದೆ. ಧರ್ಮಮಾರ್ಗವಾವುದು? ವಂಶದ ಕುಡಿ ಬರೀ ತಂದೆತಾಯಿಗಳ ಸ್ವತ್ತೇ? ಎಂಬ ಪ್ರಶ್ನೆಗಳು, ಪಾಶ್ಚಾತ್ಯ ರೀತಿಯ ಅಧ್ಯಯನ, ಭಾರತೀಯ ಧರ್ಮ, ಸಂಸ್ಕೃತಿ,ಇತಿಹಾಸ, ಶಿಲ್ಪಕಲೆ ಮುಂತಾದ ವಿಚಾರಗಳ ಬಗೆಗೆ ಚಿಂತನೆಗೆ ದೂಡುತ್ತದೆ.
ಕಾತ್ಯಾಯಿನಿಯ ಮಾನಸಿಕ ತೊಳಲಾಟ, ಸದಾಶಿವರಾಯರ ಅಸಹಾಯಕತೆ, ಕರುಣಾರತ್ನೆಯ ತ್ಯಾಗ, ಲಕ್ಷ್ಮಿಯ ನಿಷ್ಠೆ, ಶ್ರೋತ್ರಿಯವರ ಧರ್ಮನಿಯಮಿತತೆ, ದೃಡ ಮನಸ್ಸು, ಹೀಗೆ ಪ್ರತಿ ಪಾತ್ರಗಳು ನಮ್ಮ ಮನಸ್ಸನ್ನು ನಾಟುವಂತೆ, ಸೃಷ್ಟಿಸಲಾಗಿದೆ. "ಒಂದು ವಂಶದ ಬೀಜವು ಮುಂದುವರೆಯುವುದಕ್ಕಾಗಿಯೇ ಒಂದು ಕ್ಷೇತ್ರವನ್ನು ಬೇರೊಂದು ವಂಶದವರು ದಾನ ಮಾಡುತ್ತಾರೆ. ಆ ವಂಶದ ಬೀಜವನ್ನು ತನ್ನಲ್ಲಿ ಬೆಳೆಸಿ ವೃಕ್ಷ ಮಾಡಿದ ಮೇಲೆ ಆ ಕ್ಷೇತ್ರ ಸಾರ್ಥಕ್ಯ ಪಡೆಯುತ್ತದೆ" ಎನ್ನುವ ಅಂಶದ ವಾಸ್ತವಿಕ ವಿಚಾರವನ್ನು ನಮ್ಮ ಮನಸಿನಲ್ಲಿ ಬಿತ್ತಿ, ಅದರ ಬಗ್ಗೆ ಗಹನ ಚಿಂತನೆಗೆ ನಮ್ಮನ್ನು ತಳ್ಳಲ್ಪಡುವ ರೀತಿ ಕಥೆಯನ್ನು ಸುಂದರವಾಗಿ ಹೆಣೆದಿದ್ದಾರೆ.
"ಮತ್ತೊಬ್ಬರ ಪಾಪಪುಣ್ಯಗಳನ್ನ ನಿರ್ಣಯಿಸೊಕೆ ನಮಗೆ ಅಧಿಕಾರವಿಲ್ಲ. ಅದರಲ್ಲೂ ಮಾತಾಪಿತೃಗಳ ಜೀವನವನ್ನು ಅಳೆಯೋದು ಮಾಹಾಪಾಪ.ನಮ್ಮ ಕರ್ಮಗಳನ್ನು ಮಾಡೋದು ಮಾತ್ರ ನಮ್ಮ ಕರ್ತವ್ಯ" ಎಂಬ ಶ್ರೋತ್ರಿಯವರ ಮಾತಿನೊಂದಿಗೆ ಭೈರಪ್ಪನವರು ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಾರೆ
ಓದಿ ಮುಗಿಸುವ ಹೊತ್ತಿಗೆ, ಮನದ ತುಂಬ ಕತೆಯ ಪಾತ್ರಗಳು, ಸನ್ನಿವೇಶಗಳು ನೂರಾರು ಯೋಚನೆಗಳನ್ನು ತುಂಬಿಬಿಡುತ್ತದೆ. ಇದುವರೆಗೂ ನಾನು ಓದಿದ ಪುಸ್ತಕಗಳಲ್ಲಿ ಇದೊಂದು ರಸವತ್ತಾದ, ಚಿಂತಾನರ್ಹ ಅಮೋಘ ಕೃತಿ. ಪ್ರಕಟವಾಗಿ ಅರ್ಧ ಶತಮಾನ ಕಳೆದರೂ ಕೃತಿಯ ವಸ್ತು ಇಂದಿಗೂ, ಎಂದಿಗೂ ಪ್ರಸ್ತುತವಾಗುವಂತಿದೆ.
~ಪ್ರಕಾಶ್
Comments
Post a Comment