ಭೈರಪ್ಪನವರ ನಾಯಿನೆರಳು

ನಾಯಿನೆರಳು ೧೯೬೮ರಲ್ಲಿ ಪ್ರಕಟವಾದ ಭೈರಪ್ಪನವರ ಕೃತಿ. ಅವರ ಕಾದಂಬರಿಗಳಲ್ಲೆ ಇದು ತೆಳುವಾದ ಕಾದಂಬರಿ ಎನ್ನಬಹುದು. ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವ ರೀತಿ ಬಹುಜಾಣ್ಮೆಯಿಂದ ಕಥೆ ಹೆಣೆಯಲ್ಪಟ್ಟಿದೆ. ಪುನರ್ಜನ್ಮ, ಕರ್ಮಫಲ, ಪೂರ್ವಕರ್ಮ ನಮ್ಮ ನೆರಳಾಗಿ ನಾಯಿಯಂತೆ ಹಿಂಬಾಲಿಸುತ್ತದೆ ಎನ್ನುವ ಅಂಶಗಳ ಹಿನ್ನೆಲೆಯಲ್ಲಿ ಕಥಾನಕವನ್ನು ಸೃಷ್ಟಿಸಿದ್ದಾರೆ. ಭಾರತೀಯ ತತ್ವದರ್ಶನಗಳನ್ನು ಕಾದಂಬರಿಯಲ್ಲಿ ಅಳವಡಿಸಿ, ನಮ್ಮಲ್ಲಿ ಆ ಬಗ್ಗೆ ಚಿಂತನೆ ಮೂಡಿಸುವ ರೀತಿ ಬರೆಯುವುದರಲ್ಲಿ ಭೈರಪ್ಪನವರಿಗೆ ಅಗ್ರಸ್ಥಾನವನ್ನು ಕೊಡಬಹುದು. ಬಹುಶಃ ಅವರು ತತ್ವಶಾಸ್ತ್ರದ ವಿದ್ಯಾರ್ಥಿಯಾಗಿದ್ದರಿಂದ ಇದು ಸಾಧ್ಯವೆನಿಸುತ್ತದೆ. ಅವರ ವಂಶವೃಕ್ಷ, ಧರ್ಮಶ್ರೀಯಲ್ಲೂ ಭಾರತೀಯ ತತ್ವದರ್ಶನದ ಚಿಂತನೆಗಳನ್ನ ಕಂಡಿದ್ದೇನೆ. ಗಂಗಾಪುರದ ಜೋಯಿಸರ ಮನೆಯಲ್ಲಿ ಹುಟ್ಟುವ ಕ್ಷೇತ್ರಪಾಲ, ಬೆಳೆಯುತ್ತ ನನಗಾಗಲೇ ಮದುವೆಯಾಗಿದೆ, ಮಗು ಕೂಡ ಇದೆ ಅನ್ನುತ್ತಿರುತ್ತಾನೆ. ಅವನು ಹುಟ್ಟಿದಾಗಲೇ ನಾಯಿಯೊಂದು ಆ ಮನೆ ಸೇರುತ್ತದೆ. ಆ ನಾಯಿಯೊಂದೇ ಕ್ಷೇತ್ರಪಾಲನ ಸಂಗಾತಿಯಾಗಿರುತ್ತೆ.( ಇಲ್ಲಿ ಕ್ಷೇತ್ರಪಾಲನ ಫೂರ್ವಕರ್ಮವನ್ನೆ ನಾಯಿಯನ್ನಾಗಿ ಲೇಖಕರು ಸಾಂಕೇತಿಕವಾಗಿ ಸೃಷ್ಟಿಸಿದ್ದಾರೆ ಎಂದು ನನ್ನ ಭಾವನೆ.) ಹೀಗೆ ಬೆಳೆದು ೧೮ ವರ್ಷದವನಾಗುವ ಹೊತ್ತಿಗೆ, ಜೋಗಿಹಳ್ಳಿಯ ಅಚ್ಚಯ್ಯನವರು ತೀರಿಹೋದ ತಮ್ಮ ಮಗ ವಿಶ್ವೇಶ್ವರನೆ ಕ್ಷೇತ್ರಪಾಲನಾಗಿ ಮತ್ತೆ ಹುಟ್ಟಿದ್ದಾನೆ ಎಂದು ತಿಳಿದು ಗಂಗಾಪುರ...